ಇನ್ಸೆಕ್ಟಿವೋರ
ಕೀಟಾಹಾರಿ ಪ್ರಾಣಿಗಳು, ಸಸ್ತನಿಗಳಲ್ಲಿ ಇರುವ ಒಂದು ಗುಂಪು. ಮುಳ್ಳಿಲಿ, ಮೂಗಿಲಿ ಮುಂತಾದ ಕೀಟಾಹಾರಿ ಸಸ್ತನಿಗಳು ಉದಾಹರಣೆಗಳು. ಇವು ಸಾಮಾನ್ಯವಾಗಿ ರಾತ್ರಿ ಸಂಚಾರಿಗಳು. ಇನ್ಸೆಕ್ಟಿವೋರಗಳು ಸಸ್ತನಿಗಳ ವಿಕಾಸದಲ್ಲಿ ಬಲು ಹಿಂದೆಯೇ ಕಾಣಿಸಿಕೊಂಡವು. ಆದರೆ ಇವುಗಳ ಗುಂಪಿನ ಸ್ಥಾನವನ್ನು ನಿರ್ದಿಷ್ಟವಾಗಿ ನಿಷ್ಕರ್ಷಿಸುವುದು ಕಷ್ಟ. ಅನೇಕ ಮೂಲಗಳಿಂದ ಉದ್ಭವಿಸಿದ್ದು ಕೀಟಾಹಾರವನ್ನು ರೂಢಿಗೆ ತಂದುಕೊಂಡ ವಿವಿಧ ಪ್ರಾಣಿಗಳು ಈ ಗುಂಪಿಗೆ ಸೇರುವುದು ಸಾಧ್ಯ. ಹಾಗಿದ್ದರೂ ಗುಂಪನ್ನು ಸಾಮಾನ್ಯವಾಗಿ 8 ಕುಟುಂಬಗಳಾಗಿ ವಿಭಾಗಿಸಿದೆ. ಕೀಟಾಹಾರದಿಂದಾಗಿ ಇವುಗಳ ರಚನೆಯಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಅಗಿಯುವ ಕೆಲಸವಿಲ್ಲದಿರುವುದರಿಂದ ಹಲ್ಲುಗಳು ಸರಳವಾಗಿರಬಹುದು; ನಶಿಸಿಯೂ ಹೋಗಿರಬಹುದು. ಇವುಗಳ ನಾಲಗೆ ಕೀಟಗಳನ್ನು ಸಂಗ್ರಹಿಸಲು ಅನುಕೂಲಿಸುವಂತೆ ಅಂಟಾಗಿಯೂ ಮಾರ್ಪಟ್ಟಿದೆ.					
(ಎಚ್.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ